ದುಃಖವನ್ನು ನೀಗಿಸಿ ಸುಖದ ಫಲವನ್ನು ನೀಡುವ ರಾತ್ರಿಯೇ ಶಿವರಾತ್ರಿ
ಪ್ರಳಯವಾದ ಬಳಿಕ ಇಡೀ ವಿಶ್ವವೇ ಯಾರಲ್ಲಿ ಲೀನವಾಗಿ ನಿದ್ರಾವಸ್ಥೆಯಲ್ಲಿರುವುದೋ ಆತನೇ ‘ಶಿವ’. ಪ್ರಪಂಚದ ವಸ್ತುವೆಲ್ಲವೂ ಯಾವುದರೊಳಗೆ ವಿಲೀನವಾಗಿ ಬಿಡುವುದೋ ಅದೇ ‘ಲಿಂಗ’. ಶಿವನ್ನು ಮೂರ್ತಿರೂಪ ಮತ್ತು ಲಿಂಗದ ರೂಪದಲ್ಲಿ ಪೂಜಿಸುತ್ತೇವೆ. ಲಿಂಗದ ರೂಪದಲ್ಲಿ ಪೂಜಿಸುವುದೇ ಹೆಚ್ಚು ಆಚರಣೆಯಲ್ಲಿರುವುದು. ಲಿಂಗ ಎಂದರೆ ಚಿಹ್ನೆ ಅಥವಾ ಗುರುತು ಎಂದು. ಈ ಲಿಂಗವು ಸಾಕಾರದಿಂದ ನಿರಾಕಾರಕ್ಕೆ ಸಾಗಲು ನಮಗೆ ನೆರವಾಗುತ್ತದೆ ಮತ್ತು ಈ ಜಗತ್ತೇ ಒಂದು ಎನ್ನುವ ಭಾವನೆ ಮೂಡಿಸುತ್ತದೆ.
ಶಿವಲಿಂಗದಲ್ಲಿ ಎರಡು ವಿಧ: 1) ಚರಲಿಂಗ 2) ಸ್ಥಿರಲಿಂಗ
ಮನೆಯಲ್ಲಿ ಪೂಜಿಸುವ ಲಿಂಗವನ್ನು ಚರಲಿಂಗವೆಂದು ಕರೆಯುತ್ತಾರೆ. ಇದನ್ನು ನಾವು ಮಣ್ಣು ಅಥವಾ ಹಿಟ್ಟಿನಿಂದ ಮಾಡಿ ಪೂಜಿಸಿ ನಂತರ ವಿಸರ್ಜಿಸುತ್ತೇವೆ. ಇನ್ನು ಕೆಲವರು ಲಿಂಗವನ್ನು ಮೈಮೇಲೆ ಧರಿಸುತ್ತಾರೆ. ಈ ಲಿಂಗಗಳನ್ನೇ ಚರಲಿಂಗವೆನ್ನುವರು. ದೇವಾಲಯಗಳಲ್ಲಿ ಸ್ಥಾಪಿಸುರುವ ಲಿಂಗಗಳಿಗೆ ಸ್ಥಿರಲಿಂಗಗಳೆಂದು ಕರೆಯುತ್ತಾರೆ. ಅವುಗಳನ್ನು ಕಲ್ಲು ಮತ್ತು ಲೋಹಗಳಿಂದ ತಯಾರಿಸಿರುತ್ತಾರೆ. ಕೆಲವರು ಶಿವನನ್ನು ವಿವಿಧ ರೂಪದಲ್ಲಿ ಚಿತ್ರಿಸಿ ಪೂಜಿಸುತ್ತಾರೆ. ಅವು ಯಾವುವೆಂದರೆ ಹರಿಹರಮೂರ್ತಿ, ಉಗ್ರಮೂರ್ತಿ, ನೃತ್ಯಮೂರ್ತಿ, ದಕ್ಷಿಣಾಮೂರ್ತಿ, ಅರ್ಧನಾರೀಶ್ವರ ಮೂರ್ತಿ ಮತ್ತು ಭಿಕ್ಷಾಟನಾಮೂರ್ತಿ.
ಶಿವನ ವಿಶೇಷ ಮಂತ್ರ ‘ನಮಃ ಶಿವಾಯ’ ಇದನ್ನು ಪಂಚಾಕ್ಷರಿ ಮಂತ್ರವೆನ್ನುವರು. ಈ ಮಂತ್ರದಲ್ಲಿ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಎಂಬ ಪಂಚಭೂತಗಳು ಮತ್ತು ಗಂಧ, ರಸ, ರೂಪ, ಸ್ಪರ್ಶ ಮತ್ತು ಶಬ್ದವೆಂಬ ಪಂಚತನ್ಮಾತ್ರೆಗಳು ಸೇರಿವೆ. ಶಿವನ ದರ್ಶನ ಮಾಡಬೇಕಾದರೆ ನಂದೀಶ್ವರನ ಹಿಂಭಾಗವನ್ನು ಸ್ಪರ್ಶಿಸುತ್ತಾ, ಅದರ ಶೃಂಗಗಳ ಮಧ್ಯದಿಂದ ಶಿವನನ್ನು ಕಾಣಬೇಕು. ಇದರ ಒಳಾರ್ಥ ಪ್ರಾಣಿಗಳಲ್ಲೂ ಶಿವನನ್ನು ಕಾಣು ಎಂದು.
ಶಿವನ ತ್ರಿಲೋಕ ಸಂಚಾರಿ ಮತ್ತು ಬ್ರಹ್ಮ ಸ್ವರೂಪಿ ಎಂದು ಈ ಜಗತ್ತಿಗೆ ತೋರಿಸಲು ಭೂಮಿಯಿಂದ ಆಕಾಶದವರೆಗೆ ಎತ್ತರವಾಗಿ ಶಿವಲಿಂಗದ ರೂಪದಲ್ಲಿ ಜ್ಯೋತಿಯಾಗಿ ನಿಂತ ದಿನವೇ ಶಿವರಾತ್ರಿ. ಶಿವರಾತ್ರಿಯಲ್ಲಿ ಐದು ಭಾಗಗಳಿವೆ.
1) ನಿತ್ಯ ಶಿವರಾತ್ರಿ 2) ಪಕ್ಷ ಶಿವರಾತ್ರಿ 3) ಮಾಸ ಶಿವರಾತ್ರಿ 4) ಯೋಗ ಶಿವರಾತ್ರಿ ಮತ್ತು 5) ಮಹಾ ಶಿವರಾತ್ರಿ
ಮಹಾ ಶಿವರಾತ್ರಿಯು ಮಾಘ ಮಾಸದ ಕೃಷ್ಣಪಕ್ಷದ ಚತುರ್ದಶಿ ದಿನ ಬರುತ್ತದೆ. ಅಂದು ಶಿವಭಕ್ತರಿಗೆ ಪವಿತ್ರವಾದ ದಿನ. ಶಿವಪೂಜೆಯಲ್ಲಿ ಐದು ವಿಧ.
1) ಶಿವಜ್ಞಾನ ಪೂಜೆ: ಇದರಲ್ಲಿ ಶಿವನ ತತ್ವವನ್ನು ಅರಿಯುವುದು.
2) ಶಿವಭಕ್ತಿ ಪೂಜೆ : ಇದರಲ್ಲಿ ತನ್ನಲ್ಲಿರುವ ಶಿವನನ್ನು ತಿಳಿಯುವುದು.
3) ಶಿವ ಧ್ಯಾನ ಪೂಜೆ : ಇದರಲ್ಲಿ ಏಕಾಗ್ರಚಿತ್ತದಿಂದ ಶಿವನನ್ನು ಧ್ಯಾನ ಮಾಡುವುದು
4) ಶಿವವ್ರತ ಪೂಜೆ: ಇದರಲ್ಲಿ ಶುದ್ಧ ಮನಸ್ಸಿನಿಂದ ಶಿವನನ್ನು ಅರ್ಚಿಸುವುದು
5) ಶಿವ ಪೂಜೆ : ಇದರಲ್ಲಿ ಶಿವನನ್ನು ಬಾಹ್ಯವಾಗಿ ಮತ್ತು ಆಂತರಿಕವಾಗಿ ನಿರ್ವಹಿಸುವುದು.
ಒಂದು ಶಿವರಾತ್ರಿ ವ್ರತವನ್ನು ಆಚರಿಸಿದರೆ, ಸಾವಿರ ಏಕಾದಶಿ ವ್ರತಗಳು ಆಚರಿಸಿದಷ್ಟು ಫಲಗಳು ಮತ್ತು ಕಾಶಿಯಲ್ಲಿ ಮುಕ್ತಿ ಪಡೆದ ಪುಣ್ಯ ಫಲಗಳು ಸಿಗುವುದೆಂದು ಶಿವ ಪುರಾಣದಲ್ಲಿ ಹೇಳಿದೆ.
ಶಿವರಾತ್ರಿಯಲ್ಲಿ ಶಿವನನ್ನು ನಾಲ್ಕು ಜಾವದ ರೀತಿಯಲ್ಲಿ ಪೂಜಿಸುವರು. ಒಂದು ಜಾವ ಎಂದರೆ 2 ಗಂಟೆ 30 ನಿಮಿಷ. ಮೊದಲನೆಯ ಜಾವದಲ್ಲಿ ಶಿವನ ಲಿಂಗಕ್ಕೆ ಪಂಚಗವ್ಯದಿಂದ ಅಭಿಷೇಕ ಮಾಡಬೇಕು, ರೇಷ್ಮೆ ಬಟ್ಟೆಯನ್ನು ಹೊದಿಸಬೇಕು, ಅಕ್ಷತೆಯನ್ನು ಇಟ್ಟು ಚಿನ್ನದ ಆಭರಣಗಳಿಂದ ಲಿಂಗವನ್ನು ಅಲಂಕರಿಸಬೇಕು, ತಾವರೆ ಹೂವು, ಬಿಲ್ವಪತ್ರೆಗಳಿಂದ ಅರ್ಚನೆ ಮಾಡಿ ಋಗ್ವೇದವನ್ನು ಪಾರಾಯಣ ಮಾಡಿ ಪೂಜಿಸಬೇಕು.
ಎರಡನೇ ಜಾವದಲ್ಲಿ ಶಿವನ ಲಿಂಗಕ್ಕೆ ಪಂಚಾಮೃತದಿಂದ ಅಭಿಷೇಕ ಮಾಡಿ, ಹಳದಿ ವಸ್ತ್ರವನ್ನು ಹೊದಿಸಬೇಕು. ಅಕ್ಷತೆಯನ್ನು ಇಟ್ಟು ರತ್ನಾಭರಣದಿಂದ ಅಲಂಕಾರ ಮಾಡಿ, ತುಳಸಿ ಮತ್ತು ಬಿಲ್ವ ಪತ್ರೆಯಿಂದ ಅರ್ಚನೆ ಮಾಡಿ ಯಜುರ್ವೇದದಿಂದ ಪಾರಾಯಣ ಮಾಡಿ ಶಿವನನ್ನು ಪೂಜಿಸಬೇಕು.
ಮೂರನೇ ಜಾವದಲ್ಲಿ ಶಿವಲಿಂಗಕ್ಕೆ ಜೇನುತುಪ್ಪದಿಂದ ಅಭಿಷೇಕ ಮಾಡಿ, ಕೆಂಪು ರೇಷ್ಮೆ ವಸ್ತ್ರವನ್ನು ಹೊದಿಸಬೇಕು. ಗೋಧಿ ಅಕ್ಷತೆಯನ್ನು ಇಡಬೇಕು. ಮಾಣಿಕ್ಯ ಆಭರಣಗಳಿಂದ ಅಲಂಕಾರ ಮಾಡಿ ವಿವಿಧ ಪತ್ರೆಗಳಿಂದ ಅರ್ಚಿಸಿ ಸಾಮವೇದದಿಂದ ಪಾರಾಯಣ ಮಾಡಿ ಶಿವನನ್ನು ಪೂಜಿಸಬೇಕು.
ನಾಲ್ಕನೇ ಜಾವದಲ್ಲಿ ಶಿವಲಿಂಗಕ್ಕೆ ಹಾಲಿನಿಂದ ಅಭಿಷೇಕ ಮಾಡಿ ನೀಲಿ ವಸ್ತ್ರವನ್ನು ಹೊದಿಸಿ, ಉದ್ದಿನ ಬೇಳೆಯ ಅಕ್ಷತೆಯನ್ನು ಇಟ್ಟು ಮುದ್ರಾಭರಣದಿಂದ ಅಲಂಕಾರ ಮಾಡಿ ಸುಗಂಧಭರಿತ ಹೂಗಳಿಂದ ಅರ್ಚನೆ ಮಾಡಿ ಅಥರ್ವಣವೇದದಿಂದ ಪಾರಾಯಣ ಮಾಡಿ ಶಿವನನ್ನು ಪೂಜಿಸಬೇಕು.
ಶಿವನಿಗೆ ಬಿಲ್ವಪತ್ರೆಯು ಬಹಳ ಪ್ರಿಯ. ಇದರಲ್ಲಿ ಮೂರು ಎಲೆಗಳಿರುತ್ತವೆ. 1) ಪರಮಾತ್ಮನ ಪೂಜೆ ನೀನೇ 2) ಪೂಜಿಸಲ್ಪಡುವುದು ನೀನೇ 3) ಪ್ರಜಾ ಕ್ರಿಯೆಯೂ ನೀನೇ ಎಂಬ ಅದ್ವೈತ ಸಂಕೇತದ ದೃಷ್ಟಿಯಿಂದ ಈ ಬಿಲ್ವಪತ್ರೆಯನ್ನು ಪೂಜಿಸಬೇಕು.
ಈ ರೀತಿ ಶಿವರಾತ್ರಿಯಲ್ಲಿ ಶಿವನನ್ನು ಭಕ್ತಿ ಶ್ರದ್ಧೆಗಳಿಂದ ಪೂಜಿಸಿದರೆ, ನಮ್ಮ ದುಃಖವನ್ನು ನೀಗಿಸಿ ಸುಖದ ಫಲವನ್ನು ಶಿವನು ನೀಡುತ್ತಾನೆ.
ಜಾಗರಣೆ: ಶಿವರಾತ್ರಿ ದಿನ ಮಧ್ಯರಾತ್ರಿಯಲ್ಲಿ ಶಿವನಿಗೂ ಪಾರ್ವತಿಗೂ ಕಲ್ಯಾಣವಾಯಿತು. ಈ ವಿವಾಹಕ್ಕೆ ಮೂರು ಲೋಕಗಳೂ ಅಂದು ಜಾಗರಣೆ ಮಾಡಿರುತ್ತವೆ. ಈ ಕಾರಣದಿಂದ ನಾವು ಅಂದು ನಿದ್ರೆ ಮಾಡದೆ ಶಿವರಾತ್ರಿ ಜಾಗರಣೆ ಮಾಡಿ, ಶಿವನನ್ನು ಸ್ತುತಿಸಬೇಕು.
ಪುರಾಣಗಳ ಉಲ್ಲೇಖಗಳ ಪ್ರಕಾರ ಪರಮೇಶ್ವರ ಲಿಂಗರೂಪಕ್ಕೆ ಪರಿವರ್ತನೆಯಾದದ್ದು ಮಾಘ ಬಹುಳ ಚತುರ್ದಶಿಯ ದಿನ. ಅದರಿಂದಾಗಿ ಪ್ರತಿ ವರ್ಷ ಆ ದಿನದಂದು ಶಿವಭಕ್ತರೆಲ್ಲರೂ ಮಹಾ ಶಿವರಾತ್ರಿ ಆಚರಿಸುತ್ತಾರೆ. ಆಭಿಷೇಕ ಪ್ರಿಯ ಈಶ್ವರನಿಗೆ ಬಿಲ್ವಪತ್ರೆಗಳಿಂದ ಪೂಜಿಸುವುದು ಇಷ್ಟವಾದದ್ದು. ಬಿಲ್ವವೃಕ್ಷಕ್ಕೆ ಶ್ರೀ ವೃಕ್ಷ, ಶ್ರೀಪರ್ಣೀಯ ಎನ್ನುವ ಹೆಸರುಗಳೂ ಇವೆ. ಮಹಾಲಕ್ಷ್ಮಿಯ ಪತಿಯಾದ ಶ್ರೀ ವಿಷ್ಣುವು ಈಶ್ವರನ ಅರ್ಚನೆಗೋಸ್ಕರ ಸೃಷ್ಟಿ ಮಾಡಿದ ಮರ ಬಿಲ್ವವೃಕ್ಷ. ಇದರ ಪತ್ರೆಗಳಿಂದ ಪೂಜಿಸಿದರೆ ಅಭೀಷ್ಟಗಳೆಲ್ಲವನ್ನು ಶಿವನು ಈಡೇರಿಸುತ್ತಾನೆ ಎನ್ನುವ ಪ್ರತೀತಿ ಇದೆ.
ಶಿವನನ್ನು ಭಾನುವಾರದಂದು ಬಿಲ್ವಪತ್ರೆಗಳಿಂದ, ಸೋಮವಾರದಂದು ತುಳಸೀ ದಳಗಳಿಂದ, ಮಂಗಳವಾರ ಬೇಲದ ಪತ್ರೆ, ಬುಧವಾರ ಮಾದೀಫಲ ಮತ್ತು ಪತ್ರೆಗಳು, ಗುರುವಾರ ದವನದಿಂದ, ಶುಕ್ರವಾರ ನೇರಳೆ, ಶನಿವಾರ ವಿಷ್ಣುಕಾಂತ ( ಜಯಂತಿ ಲತೆ) ಪತ್ರೆ ಮತ್ತು ದರ್ಭೆಯಿಂದ ಪೂಜಿಸಿದರೆ ಆರೋಗ್ಯ ಮತ್ತು ದೀರ್ಘಾಯುಷ್ಯ, ಉಮ್ಮತ್ತಿ ಪುಷ್ಪಗಳಿಂದ ಪೂಜಿಸಿದರೆ ಉತ್ತಮ ಸಂತಾನ, ಅರ್ಕ ಪುಷ್ಪಗಳಿಂದ ಪೂಜಿಸಿದರೆ ಶೌರ್ಯ, ಕಣಗಿಲೆಯಿಂದ ಪೂಜಿಸಿದರೆ ಶತ್ರು ಜಯ, ಬಂಧೂಕ ಪುಷ್ಪಗಳಿಂದ ಪೂಜಿಸಿದರೆ ಸಂಪತ್ತು ದೊರೆಯುತ್ತವೆ ಎನ್ನುತ್ತಾರೆ.
ಭಗವಂತನು ಬಯಸುವುದು ಕೇವಲ ಭಕ್ತಿಯನ್ನು ಮಾತ್ರ. ಉಳಿದ ಪೂಜೆ, ಅರ್ಚನೆ, ಆರಾಧನೆಗಳೆಲ್ಲ ಆ ಭಕ್ತಿಯಿಂದ ಹುಟ್ಟಬೇಕು. ಏನೂ ಅರಿಯದಿದ್ದರೂ ಬಿಲ್ವಾರ್ಚನೆಯಿಂದ ಶಿವ ಸಾಯುಜ್ಯವನ್ನೇ ಪಡೆಯಬಹುದು. ಶಿವಕ್ಷೇತ್ರಗಳ ದರ್ಶನ, ಉಪವಾಸ, ಯಾಮ ಪೂಜೆ, ಜಾಗರಣೆ ಮುಂತಾದವುಗಳ ಮೂಲಕ ಮಹಾದೇವನನ್ನು ಆರಾಧಿಸಿದರೆ ಸಕಲವೂ ಪ್ರಾಪ್ತಿಯಾಗುತ್ತವೆ.
ಅಲಂಕಾರ ಪ್ರಿಯ ವಿಷ್ಣು, ಜಲರ್ಧಾರ ಪ್ರಿಯೋ ಶಿವ (ಅಭಿಷೇಕ ಪ್ರಿಯ), ನಮಸ್ಕಾರ ಪ್ರಯೋ ಭಾನು ಎಂಬಂತೆ ಪರಶಿವನಿಗೆ ಅಭಿಷೇಕ ಸೇವೆಯೇ ಅತ್ಯಂತ ಪ್ರೀತಿ. ಮಹಾಶಿವನಿಗೆ ದೇಹ, ಮನಸ್ಸು, ಬುದ್ಧಿಗಳೆಂಬ ಬಿಲ್ವ ತ್ರಿದಳಗಳನ್ನು ಅರ್ಪಿಸಿ ಮಹಾಶಿವರಾತ್ರಿಯಂದು ಪೂಜಿಸೋಣ.
ಶ್ರೀಶಿವಕೃಷ್ಣಾರ್ಪಣಮಸ್ತು
ಸಾಯಿರಾಂ
ಮಂಜುನಾಥ ಹಾರೋಗೊಪ್ಪ
No comments:
Post a Comment